ಮಂಥರೆ
	ರಾಮಾಯಣದಲ್ಲಿ ಬರುವ ಅಪ್ರಧಾನ ಮುಖ್ಯ ಪಾತ್ರ. ದಶರಥರಾಜನ ಕಿರಿಯ ರಾಣಿಯಾದ ಕೈಕೇಯಿಯ ದಾಸಿ. ಕೈಕೇಯಿ ಮದುವೆಯಾಗಿ ಗಂಡನ ಮನೆಗೆ ಬರುವಾಗ ಮಂಥರೆಯೂ ಅವಳೊಡನೆ ಬಂದಿದ್ದಳು. ಈ ಪರಿಚಾರಕಿ ಗೂನಿ; ಕುಬ್ಜೆ; ಸ್ವಭಾವವೂ ವಕ್ರ; ಬಲು ಬುದ್ದಿವಂತೆ. ತನ್ನ ಕುರೂಪವನ್ನು ಇತರ ಪರಿಚಾರಕಿಯರು ಹಾಸ್ಯಮಾಡದ ರೀತಿಯಲ್ಲಿ ಕೈಕೇಯಿಯನ್ನು ಒಲಿಸಿಕೊಂಡಿದ್ದಳು. ಇವರ ಸೂಕ್ಷ್ಮ ಬುದ್ಧಿಯನ್ನು ಕವಿಗಳು ಹಲವು ವಿಧದಲ್ಲಿ ಬಣ್ಣಿಸಿದ್ದಾರೆ.

	ರಾಮ ಮಗುವಾಗಿದ್ದಾಗ ಆಕಾಶದಲ್ಲಿ ಬೆಳಗುತ್ತಿದ್ದ ಚಂದ್ರ ತನಗೆ ಬೇಕೆಂದು ಹಟಹಿಡಿದು ರಗಳೆ ಮಾಡಹತ್ತಿದಾಗ ಏನುಮಾಡಬೇಕೆಂದು ಯಾರಿಗೂ ಹೊಳೆಯದಿದ್ದಾಗ ಈ ದಾಸಿ ಕನ್ನಡಿಯ ಮೂಲಕ ಚಂದ್ರನ ಪ್ರತಿಬಿಂಬವನ್ನು ಹಿಡಿದುಕೊಟ್ಟು ಅಳುತ್ತಿದ್ದ ಮಗುವನ್ನು ಸಮಾಧಾನಪಡಿಸಿದ ಚತುರೆ. ಹಾಗಾಗಿ ಇತರ ಪರಿಚಾರಕಿಯರಿಗೆ ಈಕೆಯಲ್ಲಿ ಅಸೂಯೆ. ಇವಳ ನೈಜ ಸ್ವಭಾವ ಹೊರಬಿದ್ದುದು ರಾಮನಿಗೆ ಯುವರಾಜ ಪಟ್ಟಾಭಿಷೇಕವಾಗಬೇಕೆಂಬ ಸಮಯದಲ್ಲಿ. ಈ ಸುದ್ದಿ ತಿಳಿದ ಮಂಥರೆ ಏನೋ ಪ್ರಮಾದವಾದಂತೆ ಭಾವಿಸಿ ಓಡೋಡಿ ಕೈಕೇಯಿಯ ಬಳಿಗೆ ಬಂದು ಎಲ್ಲವನ್ನೂ ತಿಳಿಸಿದಳು. ಮೊದಲಿಗೆ ಕೈಕೇಯಿ ಈ ಮಾತು ಕೇಳಿ ಆನಂದಗೊಂಡು ಸವಿಸುದ್ದಿಯನ್ನು ತಂದಾಕೆಗೆ ಕೊರಳಹಾರವನ್ನು ಉಡುಗೊರೆಯಾಗಿ ನೀಡಿದಳು; ಆದರೆ ಮಂಥರೆ ಅದನ್ನು ಆ ಕಡೆಗೊಗೆದು ರಾಮ ಪಟ್ಟಾಭಿಷೇಕದಿಂದ ಆಗುವ ಅನರ್ಥಗಳನ್ನು ಎಳೆ ಎಳೆಯಾಗಿ ವಿವರಿಸಿದಳು : ನಿನ್ನನ್ನು ಇತರ ರಾಣಿಯರು ನಿರ್ಲಕ್ಷಿಸುವರು, ಅಲ್ಲದೆ ಭರತನನ್ನು ಕಡೆಗಾಣಿಸಿ ಕೊನೆಗೆ ಅವನನ್ನು ಮುಗಿಸಲೂ ಬಹುದು. ಆದುದರಿಂದ ರಾಮನಿಗೆ ಹದಿನಾಲ್ಕು ವರ್ಷ ವನವಾಸ, ಭರತನಿಗೆ ಪಟ್ಟಾಭಿಷೇಕ ಈ ಎರಡು ವರಗಳನ್ನು ರಾಜನಲ್ಲಿ ಕೇಳು ಎಂದು ಕೈಕೇಯಿಯನ್ನು ಪ್ರಚೋದಿಸಿದಳು. ಇದಕ್ಕೆ ಪೂರಕವಾಗಿ ಹಿಂದೆ ದೇವಾಸುರ ಯುದ್ಧದಲ್ಲಿ ದಶರಥನನ್ನು ಎರಡುಬಾರಿ ಪ್ರಾಣರಕ್ಷಿಸಿದ ಕಾರಣ ಕೈಕೇಯಿಗೆ ದಶರಥ ಎರಡು ವರಗಳನ್ನು ಕೊಟ್ಟಿದ್ದನಷ್ಟೆ. ಅವನ್ನು ಸದುಪಯೋಗಪಡಿಸಿಕೊಳ್ಳಲು ನೆನಪಿಸಿದಳು. ಮಂಥರೆಯ ದುರ್ಬುದ್ಧಿಗೆ ಮನಸೋತ ಕೈಕೇಯಿ ದಶರಥನಲ್ಲಿ ವರಗಳನ್ನು ಕೇಳಿ ಅವನ ಮಾತಿನಲ್ಲಿ ಅವನನ್ನೇ ಬಂಧಿಸಿದಳು. ದಶರಥನ ವಚನಪರಿಪಾಲನೆಗಾಗಿ ಸೀತೆ, ಲಕ್ಷ್ಮಣರೊಡನೆ ರಾಮ ವನವಾಸಕ್ಕೆ ತೆರಳಿದ.

	ಶ್ರೀಮದ್ರಾಮಾಯಣದಲ್ಲಿ ಮಂಥರೆ ವಹಿಸಿದ ಪಾತ್ರ ರಾಮಾಯಣಕ್ಕೆ ನಾಂದಿಯಾಗುತ್ತದೆ. ರಾಮರಾಜ್ಯವಾಗಲು ಅನುವಾಗುತ್ತದೆ. ಅವಳು ವಿಧಿಯ ಅಪರಾವತಾರವೆಂದೇ ಹೇಳಬಹುದು. ಆದ್ದರಿಂದಲೇ ಕುವೆಂಪು ಶ್ರೀರಾಮಾಯಣ ದರ್ಶನದಲ್ಲಿ ಕುಬ್ಜೆ ಮಂಥರೆ ಬರಿಯ ಹುಲು ನೆವಂ' ಎಂದಿರುವುದು.
(ಕೆ.ಆರ್.ಎಸ್.ಜಿ)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ